ಹೆಲ್ತ್ ಪ್ಲಸ್

ರುಚಿ ಕಟ್ಟುವ ಉಪ್ಪಿನಲ್ಲಿ ಇರಲಿ ಇತಿ-ಮಿತಿ

ಇಡೀ ಅಡುಗೆ ಮನೆಯಲ್ಲಿ ಉಪ್ಪಿಗೆ ಸಾಕಷ್ಟು ಮರ್ಯಾದೆ ಕೊಡಬೇಕಾಗುತ್ತದೆ. ಮುಖ್ಯವಾಗಿ ಉಪ್ಪು ಜಾಸ್ತಿಯಾದರೂ ಮಾಡಿದ ಅಡುಗೆ ತಿನ್ನಲಾರದೇ ಬಿಟ್ಟು ಬಿಡುವ ಕೆಲಸ ನಡೆದರೆ ಇನ್ನೊಂದೆಡೆ ಉಪ್ಪು ಕಡಿಮೆಯಾದರೂ ಕೂಡ ಮಾಡಿದ ಅಡುಗೆ ತಿನ್ನಲು ಕಷ್ಟ. ಆದರೆ ಇತರ ವಸ್ತುಗಳಂತೆ ಉಪ್ಪಿನ ಸೇವನೆಯಲ್ಲೂ ಸಾಕಷ್ಟು ಎಚ್ಚರಿಕೆ ಅಗತ್ಯ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇರೋದಿಲ್ಲ. ಕೆಲವೊಂದು ಸಲ ನಾವು ಸೇವಿಸುವ ಉಪ್ಪು ಕಾಯಿಲೆಗಳಿಗೆ ಪೂರಕವಾಗಿ ಕೆಲಸ ಮಾಡುವ ಉದಾಹರಣೆಗಳಿವೆ. ಅತಿಯಾದ ಉಪ್ಪು ಸೇವನೆ ಹೃದ್ರೋಗ ಅಥವಾ ರಕ್ತದ ಏರೋತ್ತಡಕ್ಕೆ ಮೂಲ ಕಾರಣ ಎನ್ನೋದು ತಜ್ಞರ ಮಾತು.
ನಮ್ಮ ದೇಹಕ್ಕೆ ದಿನಕ್ಕೆ ೧೫೦೦ ಮಿಲಿ ಗ್ರಾಂ ಉಪ್ಪಿನ ಅವಶ್ಯಕತೆ ಇದೆ. ಆದರೆ ಬಹುತೇಕ ಜನರು ಅದಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಾರೆ. ಆದ್ದರಿಂದ ನಾವೆಷ್ಟು ಉಪ್ಪು ಸೇವಿಸುತ್ತೇವೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.

ಸಂಸ್ಕರಿತ ಆಹಾರ ಬೇಡ : ಸಿದ್ಧ ಆಹಾರ ಅಥವಾ ರೆಡಿ ಟು ಈಟ್ ತಿನಿಸು ಆರೋಗ್ಯಕ್ಕೆ ಒಳ್ಳೆಯದಲ್ಲ. ನೂಡಲ್ಸ್, ಸಾಸ್, ಸೂಪ್, ಗ್ರೇವಿ ಹೀಗೆ ಅವುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತವೆ. ಇವುಗಳಲ್ಲಿ ಸೋಡಿಯಂನ ಪ್ರಮಾಣ ಅತೀ ಹೆಚ್ಚಿರುತ್ತವೆ. ಇಂತಹ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಬಾಧಕವಾಗುತ್ತದೆ.

ಡಯೆಟ್ ಬದಲಾಯಿಸಿ : ಸಂಸ್ಕರಿತ ಆಹಾರದ ಬದಲು ನೈಸರ್ಗಿಕವಾಗಿ ತಯಾರಿಸಿದ ಆಹಾರ ಸೇವಿಸುವುದು ಯಾವಾಗಲೂ ಅತ್ಯುತ್ತಮ. ಯೋಗ್‌ಹಾರ್ಟ್, ಹಾಲಿನಂತಹ ಕಡಿಮೆ ಕೊಬ್ಬಿನ ಅಂಶವಿರುವ ಹೈನುಗಾರಿಕೆ ಉತ್ಪನ್ನವನ್ನು ಸೇವಿಸಿ. ಇನ್ನು ತಾಜಾ ಹಣ್ಣು, ಮೊಟ್ಟೆ, ಮಾಂಸ, ತರಕಾರಿಗಳು ಕೂಡ ನಿಮ್ಮ ದಿನದ ಆಹಾರದ ಪಟ್ಟಿಯಲ್ಲಿರಲಿ.

ನಾಲಿಗೆ ಹಿಡಿತದಲ್ಲಿರಲಿ : ಒಮ್ಮೆಲೆ ಉಪ್ಪು ಸೇವನೆ ಕಡಿಮೆ ಮಾಡಬೇಡಿ. ಹಾಗೇನಾದರೂ ಮಾಡಿದರೆ ಆಗ ಉಪ್ಪು ತಿನ್ನಬೇಕೆಂಬ ಹಪಿಹಪಿ ಹೆಚ್ಚುತ್ತದೆ. ಇದರ ಬದಲಾಗಿ ನಿಧಾನವಾಗಿ ಆಹಾರಕ್ಕೆ ಸೇರಿಸುವ ಉಪ್ಪಿನ ಪ್ರಮಾಣ ಕಡಿಮೆ ಮಾಡಿ ಹೊಸ ಆಹಾರ ಕ್ರಮಕ್ಕೆ ನಿಮ್ಮ ನಾಲಗೆಯನ್ನು ಒಗ್ಗಿಸಿಕೊಳ್ಳಿ. ದಿನಕ್ಕೆ ೧೫೦೦ ಮಿಲಿ ಗ್ರಾಂಗೆ ಅದನ್ನು ನಿಧಾನವಾಗಿ ಇಳಿಸಿಕೊಳ್ಳಿ. ಉಪ್ಪು ಯಾವತ್ತೂ ರುಚಿಗೆ ತಕ್ಕಷ್ಟಿರಬೇಕು. ಹದ ತಪ್ಪಿದರೆ ಅದು ಆಪತ್ತಿಗೆ ಕಾರಣವಾಗುತ್ತದೆ. ಅದಕ್ಕಾಗಿ ಉಪ್ಪಿನಲ್ಲಿ ಇರಲಿ ಇತಿ-ಮಿತಿ ಎನ್ನುವ ಮಾತು ಆಧುನಿಕ ಬದುಕಿಗೆ ಸರಿಯಾಗಿ ಅನ್ವಯವಾಗುತ್ತದೆ.