ಹೆಲ್ತ್ ಪ್ಲಸ್

ಚೆನ್ನಾಗಿ ನಿದ್ರೆ ಮಾಡಿ ನಿಮ್ಮ ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಿ

ಮೆದುಳಿನಲ್ಲಿ ಎಷ್ಟು ನೆನಪಿನ ಸಂಗ್ರಹವಿರುತ್ತದೆ ಹಾಗೂ ನಿದ್ರೆ ಕಡಿಮೆಯಿಂದ ಅದರಲ್ಲಿ ಎಷ್ಟನ್ನು ನಾವು ನೆನಪು ಮಾಡಿಕೊಳ್ಳಲು ಸಾಧ್ಯ ಎನ್ನುವುದರ ಕುರಿತು ಇತ್ತೀಚೆಗೆ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ.  ಇದರಲ್ಲಿ ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಹೊಸ ಮಾದರಿಗಳನ್ನು ಉಲ್ಲೇಖಿಸಲಾಗಿದ್ದು, ಇವು ಅತ್ಯಂತ ಉಪಯುಕ್ತ ಎಂದು ಹೇಳಲಾಗಿದೆ. ಈ ಮೂಲಕ ವಯಸ್ಸಾದವರಲ್ಲೂ ನೆನಪಿನ ಶಕ್ತಿ ನಾಶದ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ.

ನಿದ್ರೆಯಲ್ಲಿ ಹಲವು ಹಂತಗಳಿವೆ. ಹಗುರ ನಿದ್ರೆ, ಗಾಢ ನಿದ್ರೆ ಮತ್ತು ಆರ್‌ಇಎಂ (ರ್‍ಯಾಪಿಡ್ ಐ ಮೂವ್‌ಮೆಂಟ್) ಎಂದು ಅವುಗಳನ್ನು ವಿಭಾಗಿಸಲಾಗಿದೆ. ಸಾಮಾನ್ಯವಾಗಿ ಆರ್‌ಇಎಂ ಹಂತದಲ್ಲಿ ಹೆಚ್ಚು ಕನಸುಗಳು ಬೀಳುತ್ತವೆ. ಈ ಹಂತವನ್ನು ನಾವು ತೊಂಬತ್ತು ನಿಮಿಷಗಳಲ್ಲಿ ಒಮ್ಮೆ ಪ್ರವೇಶಿಸುತ್ತೇವೆ. ಯಾವುದೇ ವಿಷಯದ ಅರಿವಿನ ನಿಟ್ಟಿನಲ್ಲಿ ಆರ್‌ಇಎಂ ಮಹತ್ವದ ಪಾತ್ರ ವಹಿಸುತ್ತದೆ.

ಒಂದು ವೇಳೆ ಸರಿಯಾಗಿ ನಿದ್ರೆ ಮಾಡದಿದ್ದರೆ, ಕಲಿಕೆಯ ಸಾಮರ್ಥ್ಯ ಶೇ. 40ರಷ್ಟು ಕಡಿಮೆಯಾಗುತ್ತದೆ. ಮೆದುಳಿನಲ್ಲಿರುವ ಹಿಪ್ಪೊಕ್ಯಾಂಪಸ್ ಸ್ಮರಣ ಶಕ್ತಿ ಹೆಚ್ಚಿಸಲು ನೆರವು ನೀಡುತ್ತದೆ. ಒಂದು ವೇಳೆ ನಿದ್ರೆ ಕಡಿಮೆಯಾದರೆ ಆಗ ಇದರ ಮೇಲೆ ಗಣನೀಯ ಪರಿಣಾಮ ಉಂಟಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಒಮ್ಮೆ ನಾವು ಎಚ್ಚರವಾದರೆ ಆಗ ಘಟಿಸಿದ ಎಲ್ಲಾ ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ಅವುಗಳಲ್ಲಿ ಸಾಕಷ್ಟನ್ನು ಮರೆತು ಬಿಡುತ್ತೇವೆ. ನೆನಪುಗಳು ಮೊದಲಿಗೆ ತೀರಾ ಆಳವಾಗಿ ಬೇರು ಬಿಡುವುದಿಲ್ಲ. ಅವು ತುಂಬಾ ಸೂಕ್ಷ್ಮವಾಗಿದ್ದು, ನಾವು ಗಾಢ ನಿದ್ರೆಗೆ ಜಾರಿದಾಗ ಅವುಗಳು ಮೆದುಳಿನ ಆಳದಲ್ಲಿ ಜಾಗ ಪಡೆಯಲು ಯಶಸ್ವಿಯಾಗುತ್ತವೆ. ಯಾವುದನ್ನು ನೆನಪಿಟ್ಟುಕೊಳ್ಳಬೇಕು ಯಾವುದನ್ನು ಬಿಟ್ಟುಬಿಡಬಹುದು ಎಂಬುದನ್ನು ಅದು ನಿರ್ಧರಿಸುತ್ತದೆ.