ಟೆನ್ನಿಸ್ ಲೋಕದ ಸಾನಿಯಾ ಮಿರ್ಜಾ ತಮ್ಮ ಕೆರಿಯರ್ ತುಂಬಾ ಸುದ್ದಿಯ ಅಂಗಳದಲ್ಲಿಯೇ ಜಿಗಿದುಕೊಂಡು ಬಂದವರು. ಅದರಲ್ಲೂ ಮುಖ್ಯವಾಗಿ ತಮ್ಮ ಹಾಟ್ ಫುಲ್ ಸ್ಟೇಟ್ಮೆಂಟ್ಗಳು ಸಾನಿಯಾ ವೃತ್ತಿ ಬದುಕಿನ ಪುಟಗಳನ್ನು ರಂಗೀನ್ ಮಾದರಿಯಲ್ಲಿ ಜೋಡಿಸಿಕೊಂಡು ಹೋಯಿತು. ಇಂತಹ ಸಾನಿಯಾ ತೀರಾ ಇತ್ತೀಚೆಗೆ ಪ್ರಶಸ್ತಿ ಗೆದ್ದುಕೊಂಡು ಹೊರಬಂದಿದ್ದು ಎಲ್ಲರಿಗೂ ಗೊತ್ತು. ಸಾನಿಯಾ ಮಿರ್ಜಾ ಬರೀ ಟೆನ್ನಿಸ್ ಲೋಕದಲ್ಲಿ ಮಾತ್ರ ಸಾಧನೆ ಮಾಡ್ತಾ ಇಲ್ಲ. ಸಾನಿಯಾ ಸಾಮಾಜಿಕ ಸೇವೆಯಲ್ಲಿ ಮುಳುಗಿಕೊಂಡಿದ್ದಾರೆ. ಆದರೆ ಪ್ರಚಾರದಿಂದ ಕೊಂಚ ದೂರವೇ ಉಳಿದು ಬಿಟ್ಟಿದ್ದಾರೆ.
ಅಂದಹಾಗೆ ಸಾನಿಯಾ ತಮ್ಮ ಅಭಿಮಾನಿ ಸೋನಿಯಾ ಚೌಧುರಿಗಾಗಿ ಒಂದು ಉತ್ತಮ ಕೆಲಸ ಮಾಡಿದ್ದಾರೆ. ಅಂದಹಾಗೆ ಸೋನಿಯಾ ಘಾಜಿಯಾಬಾದ್ನ ಹುಡುಗಿ.ಆಸಿಡ್ ದಾಳಿಗೆ ಬಲಿಯಾದ ಹುಡುಗಿಯರ ಸಾಲಿನಲ್ಲಿ ಸೋನಿಯಾ ಕೂಡ ಇದ್ದಾಳೆ. ಇಂತಹ ಸೋನಿಯಾ ತನ್ನ ಬದುಕು ಕಟ್ಟಲು ಬ್ಯೂಟಿಷಿಯನ್ ಸೆಲೂನ್ವೊಂದನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ತಮ್ಮ ಸ್ವಾಭಿಮಾನ ಮೆರೆದಿದ್ದರು.
ಆದರೆ ಕುರೂಪವಾಗಿ ಕಾಣುತ್ತಿದ್ದ ಸೋನಿಯಾ ಸೆಲೂನ್ಗೆ ಬರುತ್ತಿದ್ದ ಮಂದಿ ಕೂಡ ಬಹಳಷ್ಟು ಕಡಿಮೆ. ಕಂಗಾಲಾಗಿ ಹೋಗಿದ್ದ ಸೋನಿಯಾ ಬದುಕು ಕಷ್ಟದ ಕೋಟಲೆಯಲ್ಲಿ ಸಿಕ್ಕಿಕೊಂಡು ಪರದಾಡುತ್ತಿತ್ತು. ಅಂದಹಾಗೆ ಸೋನಿಯಾ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರ ಅಪ್ಪಟ ಅಭಿಮಾನಿ. ಸೋನಿಯಾಳ ಕಷ್ಟ ಬದುಕು ಹೇಗೋ ಸಾನಿಯಾ ಮಿರ್ಜಾರ ಕಿವಿ ಮುಟ್ಟಿಸುವ ಕೆಲಸವನ್ನು ಖಾಸಗಿ ವಾಹಿನಿಯೊಂದು ಮಾಡಿತು. ಥಟ್ ಅಂತಾ ಸಾನಿಯಾ ಮಿರ್ಜಾ ಸೋನಿಯಾಳಿಗೆ ನೆರವು ಕೊಡಲು ಮುಂದೆ ಬಂದರು.
ಆದರೆ ಸ್ವಾಭಿಮಾನದ ಚಿಲುಮೆ ಸೋನಿಯಾ ಒಪ್ಪಿಕೊಳ್ಳಲಿಲ್ಲ. ಇದೇ ಸಮಯದಲ್ಲಿ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋವೊಂದನ್ನು ಏರ್ಪಾಡು ಮಾಡಿತ್ತು. ಈ ಶೋನಲ್ಲಿ ಸೋನಿಯಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿದರೆ ಅವರ ಸಹಾಯಕರಾಗಿ ಸಾನಿಯಾ ಮಿರ್ಜಾ ಕಾಣಿಸಿಕೊಂಡರು. ಸಾನಿಯಾ ಕೈಯಿಂದ ಮೇಕಪ್ ಮಾಡಿಸಿಕೊಳ್ಳಲು ಅವರ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಸೋನಿಯಾ ಬದುಕಿಗೆ ನೆರವಾದರು. ಅಂದಹಾಗೆ ಸಾನಿಯಾ ಮಿರ್ಜಾ ಮೇಕಪ್ ಮಾಡಿಕೊಟ್ಟ ಹಣವೆಷ್ಟು ಗೊತ್ತಾ ಬರೋಬರಿ ೫ ಲಕ್ಷದ ೮೫ ಸಾವಿರ ರೂಪಾಯಿ. ಇದರ ಜತೆಯಲ್ಲಿ ಸಾನಿಯಾರ ಮೇಕಪ್ ಕೆಲಸದಲ್ಲಿ ನೆರವಾಗುತ್ತಿದ್ದ ಶೆಹನಾಜ್ ಅವರನ್ನು ಕೂಡ ಸೋನಿಯಾಳಿಗೆ ಪರಿಚಯ ಮಾಡಿಕೊಟ್ಟು ಬ್ಯೂಟಿ ಟಿಪ್ಸ್ಗಳನ್ನು ಕೊಡುವಲ್ಲಿವರೆಗೂ ಸಾನಿಯಾ ಮಿರ್ಜಾ ತನ್ನ ಅಭಿಮಾನಿಗೆ ನೆರವಾದರು.