ಲಿಂಬೆ ಮಾರುವ ಬಾಲಿವುಡ್ ನಟಿ ಕನ್ನಡಕ್ಕೆ ಬರುತ್ತಾರೆ ಎನ್ನುವ ಸುದ್ದಿ ಬಂದಿದೆ. ಸುದೀಪ್ ನಿರ್ದೇಶನದ ‘ಮಾಣಿಕ್ಯ’ ಚಿತ್ರದಲ್ಲಿ ಜೂಹಿ, ರವಿಚಂದ್ರನ್ ಅವರ ಪೇರ್ ಆಗುವ ಸಾಧ್ಯತೆ ಇದೆ ಎಂದು ಮೊದಲ ಬಾರಿಗೆ ಸುದ್ದಿಯಾಗಿತ್ತು.
ಸೆಕೆಂಡ್ ಟೈಮ್ ಆಗಿದ್ದು ‘ಪ್ರೇಮಲೋಕದಲ್ಲಿ ರಣಧೀರ’ ಚಿತ್ರ ಶುರುವಾದಾಗ. ಆ ಚಿತ್ರದ ಮುಹೂರ್ತದ ದಿನ ಚಿತ್ರದಲ್ಲಿ ಜೂಹಿ ನಟಿಸುವ ಸಾಧ್ಯತೆ ಇದೆ ಎಂದಿದ್ದರು. ಎರಡು ಬಾರಿಯೂ ಸುದ್ದಿ ಸುಳ್ಳಾಗಿತ್ತು.
ಈಗ ಜೂಹಿ ಚಾವ್ಲಾ ಕನ್ನಡಕ್ಕೆ ಮತ್ತೆ ಬರುತ್ತಿರುವ ಸುದ್ದಿಯಿದೆ. ಈ ಬಾರಿ ಅವರನ್ನು ಕರೆತರುವುದಕ್ಕೆ ಪ್ರಯತ್ನಿಸುತ್ತಿರುವುದು ‘ಪುಷ್ಪಕ ವಿಮಾನ’ ತಂಡದವರು. ರಮೇಶ್ ಅರವಿಂದ ಅಭಿನಯದ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವಿದೆಯಂತೆ. ಅದನ್ನು ಜೂಹಿ ಮಾಡಿದರೆ ಚೆಂದ ಎಂದು ಚಿತ್ರತಂಡದವರ ಅಭಿಪ್ರಾಯ.
ಯಾರ ಹತ್ತಿರವೋ ಪೋನ್ ನಂಬರ್ ಪಡೆದು, ಈಗಾಗಲೇ ಜೂಹಿಯನ್ನು ಸಂಪರ್ಕಿಸಲಾಗಿದೆಯಂತೆ. ಚಿತ್ರದ ಪ್ರೋಮೋ ತೋರಿಸಿದ್ದೂ ಆಗಿದೆಯಂತೆ.
ಅಂದಹಾಗೆ, ‘ಪುಷ್ಪಕ ವಿಮಾನ’ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ರಮೇಶ್, ರವಿ ಕಾಳೆ ಮುಂತಾದವರು ಅಭಿನಯಿಸಿದ ಕೆಲವು ದೃಶ್ಯಗನ್ನು ವಿಶೇಷ ಸೆಟ್‍ವೊಂದರಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಬಾಕಿ ಉಳಿದಿರುವ ಚಿತ್ರೀಕರಣದಲ್ಲಿ ನಟಿಸುವುದಕ್ಕೆ ಜೂಹಿ ಒಪ್ಪುತ್ತಾರೋ, ಇಲ್ಲವೋ ಎಂಬುದಷ್ಟೇ ಎಲ್ಲರಲ್ಲೂ ಉಳಿದಿರುವ ಕುತೂಹಲ.