ದೊಡ್ಡ ಸುದ್ದಿ ಹೊಸ ಸುದ್ದಿ

ಈ ಊರಲ್ಲಿ ಹೆಣ್ಣು ಹುಟ್ಟಿದರೆ 111 ಗಿಡ ನೆಟ್ಟು ಸಂಭ್ರಮಿಸುತ್ತಾರೆ…

ಹೌದು ರಾಜಸ್ಥಾನದಲ್ಲಿ ಪಿಪ್ಲಂತ್ರಿ ಎಂಬ ಗ್ರಾಮವಿದೆ. ಇಲ್ಲಿ ಒಂದು ಹೆಣ್ಣು ಮಗು ಹುಟ್ಟಿದರೆ ಸಾಕು ಊರಿನ ಜನರೆಲ್ಲ ಹಬ್ಬ ಆಚರಿಸಿದಂತೆ ಖುಶಿ ಪಡುತ್ತಾರೆ. ಅಷ್ಟೇ ಅಲ್ಲಾ ಬರೋಬ್ಬರಿ 111 ಗಿಡಗಳನ್ನು ನೆಡುತ್ತಾರೆ. ಅದನ್ನು ಬೆಳೆಸುತ್ತಾರೆ. ಗಿಡ ಬೆಳೆದಂತೆಲ್ಲಾ ಮಗು ಕೂಡಾ ಚೆನ್ನಾಗಿ ಬೆಳೆಯಲಿ ಎಂದು ಆಶಿಸುತ್ತಾರೆ. ಇಲ್ಲಿಯವರೆಗೂ ಈ ಗ್ರಾಮದಲ್ಲಿ 25 ಮಿಲಿಯನ್ ಗೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಅದರಲ್ಲಿ ಬೇವಿನ ಮರ, ಮಾವಿನ ಮರ, ಶೀಶಮ್ ಎಂಬ ಮರಗಳನ್ನು ನೆಡಲಾಗಿದೆ.

ಪಿಪ್ಲಂತ್ರಿ ಗ್ರಾಮಸ್ಥರು ಹೆಣ್ಣು ಮಗು ಹುಟ್ಟಿದರೆ 111 ಮರ ನೆಡುವುದು ಮಾತ್ರವಲ್ಲ. ಗ್ರಾಮದಲ್ಲೆಲ್ಲಾ ದೇಣಿಗೆ ಸಂಗ್ರಹಿಸಲಾಗುತ್ತದೆ. ಸುಮಾರು 21 ಸಾವಿರ ರೂಪಾಯಿ ದೇಣಿಗೆ ಸಂಗ್ರಹಿಸುತ್ತಾರೆ. ಬಳಿಕ ಮಗುವಿನ ಪೋಷಕರಿಂದ 10 ಸಾವಿರ ರೂಪಾಯಿ ಪಡೆಯಲಾಗುತ್ತದೆ. ಈ ಒಟ್ಟು ಹಣ 31 ಸಾವಿರವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗುತ್ತದೆ. 20 ವರ್ಷಗಳ ಫಿಕ್ಸ್‌ಡ್‌ ಡೆಪೋಸಿಟ್‌ ಮಾಡಲಾಗುತ್ತದೆ. ಆ ಹಣದಿಂದ ಬರುವ ಬಡ್ಡಿಯಲ್ಲೇ ಮಗುವಿನ ಶಿಕ್ಷಣ, ಮದುವೆ ವೆಚ್ಚ ಎಲ್ಲವನ್ನೂ ಭರಿಸಲಾಗುತ್ತದೆ.

ಈ ಊರಿನ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಬಾಲ್ಯ ವಿವಾಹಕ್ಕೆ ಜಾಗವಿಲ್ಲ. ಹೆಣ್ಣು ಹುಟ್ಟಿದ ಕೂಡಲೇ ಪೋಷಕರ ಬಳಿ 20 ವರ್ಷದವರೆಗೂ ಮದುವೆ ಮಾಡುವುದಿಲ್ಲ ಎಂಬ ಕರಾರು ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ. ಹಾಗೂ ಎಲ್ಲಾ ಹೆಣ್ಣು ಮಕ್ಕಳಿಗೂ ಸರಿಯಾದ ಶಿಕ್ಷಣ ನೀಡುತ್ತೇವೆ ಎಂದು ಸಹಿ ಮಾಡುತ್ತಾರೆ. ಅದೇ ರೀತಿ ಹೆಣ್ಣು ಮಗು ಹುಟ್ಟಿದಾಗ ನೆಟ್ಟ ಗಿಡಗಳನ್ನು ಸರಿಯಾಗಿ ಕಾಪಾಡಿಕೊಂಡು ಬರುತ್ತೇವೆ ಎಂದು ಸಹ ಪ್ರಮಾಣ ಮಾಡುತ್ತಾರೆ.

ಈ ಗ್ರಾಮದಲ್ಲಿ ಜನರು ಮರಗಳನ್ನು ಸುಮ್ಮನೆ ನೆಡುವುದು ಮಾತ್ರವಲ್ಲ ಅದರ ಸರಿಯಾದ ಪೋಷಣೆ ಸಹ ಮಾಡುತ್ತಾರೆ. ಹೆಚ್ಚಾಗಿ ಲೋಳೆಸರವನ್ನು ಬೆಳೆಯಲಾಗುತ್ತದೆ. ಸುಮಾರು 2.5 ಮಿಲಿಯನ್ ಲೋಳೆಸರ ಗಿಡಗಳನ್ನು ನೆಡಲಾಗಿದೆ. ಅದನ್ನು ಮಾರುಕಟ್ಟೆ ಸಾಗಿಸಿ ಲಾಭ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲ ಪ್ರಗತಿಪರ ರೈತರು ಲೋಳೆಸರದ ಜೆಲ್ ಮತ್ತು ಜ್ಯೂಸ್ ಮಾಡಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಾರೆ.

ಈ ಪದ್ಧತಿ ಆರಂಭವಾಗಲು ಕಾರಣ :

ಈ ಸಂಪ್ರದಾಯ ಆರಂಭವಾದುದು ಅಲ್ಲಿನ ಮಾಜಿ ನಾಯಕ ಶ್ಯಾಮ್‌ ಸುಂದರ್‌ ಅವರಿಂದ. ಅವರ ಮಗಳು ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ್ದರು. ಅಲ್ಲಿಂದ ನಂತರದಲ್ಲಿ ಈ ಊರಿನಲ್ಲಿ ಹೆಣ್ಣು ಮಕ್ಕಳ ಹುಟ್ಟನ್ನು ಸಂಭ್ರಮಿಸುತ್ತಾರೆ. ಇಲ್ಲಿವರೆಗೆ ಇಲ್ಲಿ ಸುಮಾರು ಮಿಲಿಯನ್‌ ಗಟ್ಟಲೆ ಗಿಡಗಳನ್ನು ನೆಡಲಾಗಿದೆ.  ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಈ ಊರಿನಲ್ಲಿ ಕಳೆದ 7-8 ವರ್ಷಗಳಲ್ಲಿ ಯಾವುದೇ ಪೊಲೀಸ್‌ ಕೇಸ್‌ ದಾಖಲಾಗಿಲ್ಲ.

ಇಂತಹ ವಿಶೇಷವಾದ ಅದರಲ್ಲೂ ಮಹಿಳೆಯರಿಗೆ ಇಷ್ಟೊಂದು ಗೌರವ ನೀಡುವ ಗ್ರಾಮ ದೇಶದಲ್ಲೇ ಮತ್ತೊಂದು ಇರಲು ಸಾಧ್ಯವಿಲ್ಲ.

Tags