ತಮ್ಮ ಹಿಂದೂ ಗೆಳೆಯನ ಇಬ್ಬರು ಅವಳಿ ಮಕ್ಕಳನ್ನು ದತ್ತು ಪಡೆಯಲು ಮುಸ್ಲಿಂ ಕುಟುಂಬವೊಂದು ನ್ಯಾಯಾಲಯದಲ್ಲಿ ಹೋರಾಟ ನಡೆಸಿ, ಕೊನೆಗೂ ಮಕ್ಕಳನ್ನು ದತ್ತು ಪಡೆಯುವಲ್ಲಿ ನ್ಯಾಯಾಲಯದ ಅನುಮತಿ ಪಡೆದುಕೊಂಡಿದೆ. ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಪೈಲೆಟ್ ಆಗಿರುವ ಮೊಹ್ಮದ್ ಶಾನವಾಜ್ ಜಹೀರ್, ಮೃತಪಟ್ಟಿರುವ ತಮ್ಮ ಗೆಳೆಯನ ಇಬ್ಬರು ಅವಳಿ ಮಕ್ಕಳಾದ ಆಯುಷ್ ಹಾಗೂ ಪ್ರಾರ್ಥನಾ ಅವರನ್ನು ದತ್ತು ಪಡೆದುಕೊಂಡಿದ್ದಾರೆ.
ಆಯುಷ್ ಹಾಗೂ ಪ್ರಾರ್ಥನಾ ತಂದೆ ಕೂಡ ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಪೈಲೆಟ್ ಆಗಿದ್ದರು. ಅಲ್ಲದೇ ತಾಯಿ ಗಗನಸಖಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ 2012ರಲ್ಲಿ ಇವರಿಬ್ಬರೂ ಮೃತಪಟ್ಟು, ಇಬ್ಬರೂ ಮಕ್ಕಳು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಆದರೆ ತಮ್ಮ ಸಂಬಂಧಿಕರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಯುಷ್ ಹಾಗೂ ಪ್ರಾರ್ಥನಾ ಮೊಹ್ಮದ್ ಶಾನವಾಜ್ ಜಹೀರ್ ಅವರಿಗೆ ಫೋನ್ ಮಾಡಿ ಅಲವತ್ತುಕೊಂಡಿದ್ದರು. ಈ ಕಾರಣಕ್ಕೆ ಇಬ್ಬರೂ ಮಕ್ಕಳನ್ನು ತಾವು ದತ್ತು ಪಡೆಯುವದಾಗಿ ಜಹೀರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಇದೇ ವೇಳೆ ಭಾರತೀಯ ಕಮರ್ಶಿಯಲ್ ಪೈಲೆಟ್ಸ್ ಅಸೋಸಿಯೇಶನ್ ವತಿಯಿಂದ ಇಬ್ಬರೂ ಮಕ್ಕಳ ಹೆಸರಿನಲ್ಲಿ 1 ಕೋಟಿ ರೂಪಾಯಿ ಹಣ ಸಂಗ್ರಹಿಸಿದ್ದು, ನ್ಯಾಯಾಲಯ ಕೂಡ ಮಕ್ಕಳನ್ನು ದತ್ತು ಪಡೆಯಲು ಜಹೀರ್ ಅವರಿಗೆ ಅನುಮತಿ ನೀಡಿದೆ. ಅಲ್ಲದೇ ಮಕ್ಕಳು ಹಿಂದೂ ಧರ್ಮ ಪಾಲಿಸಲು ಅನುವಾಗುವಂತೆ ಅವರ ಮೇಲೆ ನಿಗಾ ಇಡುವಂತೆ ಪಕ್ಕದ ಮನೆಯವರಿಗೆ ನ್ಯಾಯಾಲಯ ಸೂಚನೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಹೀರ್, ತಾವು ಅಗಲಿದ ತಮ್ಮ ಗೆಳೆಯನ ಆಸೆಯಂತೆ ಅವರ ಮಕ್ಕಳನ್ನು ದತ್ತು ಪಡೆದುಕೊಂಡಿದ್ದು, ಅವರನ್ನು ಹಿಂದೂ ಸಂಪ್ರದಾಯದಂತೆ ಬೆಳೆಸುವುದಾಗಿ ಹಾಗೂ ಉತ್ತಮ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.














