ವಾಷಿಂಗ್ಟನ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೊವೊಂದು ಇದೀಗ ಒಂದು ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ದೇಣಿಗೆ ನೀಡಲು ಸ್ಫೂರ್ತಿ ನೀಡುತ್ತಿದೆ.
ವಿದೇಶಿ ಯುವತಿಯೊಬ್ಬಳು ಹಸಿವಿನಿಂದ ಬಳಲಿದ್ದ ಪುಟ್ಟ ಬಾಲಕನಿಗೆ ನೀರು ಕುಡಿಸುತ್ತಿರುವ ಫೋಟೊ ಇದೀಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಡತನದ ಬೇಗುದಿಯಲ್ಲಿ ಬೇಯುತ್ತಿರುವ ನೈಜಿರಿಯಾದಲ್ಲಿ ತೆಗೆದ ಈ ಫೋಟೊ ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ವದ ಮೂಲೆ ಮೂಲೆಯನ್ನು ತಲುಪಿದೆ. ಈ ಹೃದಯ ಹಿಂಡುವ ಫೋಟೊವನ್ನು ಲಕ್ಷಾಂತರ ಮಂದಿ ಷೇರ್ ಮಾಡಿದ್ದು, ಇದೀಗ ಹಲವು ಸಂಘ ಸಂಸ್ಥೆಗಳು ನೈಜಿರಿಯಾಗೆ ಆರ್ಥಿಕವಾಗಿ ನೆರವಾಗಲು ಮುಂದೆ ಬಂದಿದ್ದಾರೆ.
ಅಲ್ಲದೆ ವಿಶ್ವದ ನಾನಾ ಭಾಗದಲ್ಲಿರುವ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳಿಂದ ಆರ್ಥಿಕ ನೆರವು ಬರುತ್ತಿದ್ದು, ಬೃಹತ್ ಪ್ರಮಾಣದಲ್ಲಿ ನೈಜಿರಿಯಾಗೆ ದೇಣಿಗೆ ಸಂಗ್ರಹವಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಆಫ್ರಿಕಾ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿ ಫೌಂಡೇಶನ್ ಸಂಸ್ಥೆ ಫೋಟೊದಲ್ಲಿರುವ ಮಗುವನ್ನು ತನ್ನ ವಶಕ್ಕೆ ಪಡೆದುಕೊಂಡು ಚಿಕಿತ್ಸೆ ನೀಡುತ್ತಿರುವುದಾಗಿ ಹೇಳಿಕೊಂಡಿದೆ.
ಹಸಿವಿನಿಂದ ಬಳಲಿ ನೀರು ಕುಡಿಯುತ್ತಿರುವ ಬಾಲಕನ ಫೋಟೊ: ಬೃಹತ್ ದೇಣಿಗೆಗೆ ಸ್ಫೂರ್ತಿ
