ಸೌಂದರ್ಯ ಪ್ರಜ್ಞೆ ಎನ್ನುವುದು ಎಲ್ಲರಿಗೂ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಸುಂದರವಾಗಿ ಕಾಣಬೇಕು ಎನ್ನುವ ಕಾನ್ಸೆಫ್ಟ್ನೊಳಗೆ ಬದುಕು ಕಟ್ಟುವ ಮಂದಿ ಈಗ ಜಾಸ್ತಿಯಾಗುತ್ತಿದ್ದಾರೆ. ಮುಖ್ಯವಾಗಿ ಎಲ್ಲರಿಗೂ ಅಂದ ಚೆಂದದ ಕಾಳಜಿ ಬೆಳೆಯುತ್ತಿದೆ ಎನ್ನುವ ವಿಚಾರ ಗಟ್ಟಿಯಾಗುತ್ತಿದ್ದಂತೆ ಇದರಲ್ಲಿ ಉದ್ಯೋಗದ ಅವಕಾಶಗಳು ಕೂಡ ಬಾಗಿಲು ತೆರೆದುಕೊಂಡು ಆಕರ್ಷಣೆ ಮಾಡುತ್ತಿದೆ. ಆದ್ದರಿಂದ ಈಗ ಸೌಂದರ್ಯ ಮತ್ತು ಅಲಂಕಾರ ಎಂಬುದು ಹಣ ಗಳಿಕೆಯ ಒಂದು ಸಾಧನವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.
ದೇಶದಲ್ಲಿ ಈಗ ಪ್ರಸಾಧನ( ಮೇಕಪ್) ಕ್ಷೇತ್ರವೆಂಬುದು ಬಹುಕೋಟಿ ಡಾಲರ್ ಮೊತ್ತದ ಉದ್ಯಮವಾಗಿದ್ದು, ಇದು ಸಾಕಷ್ಟು ಉದ್ಯೋಗ ಅವಕಾಶಗಳನ್ನೂ ಒದಗಿಸುತ್ತಿದೆ. ಒಬ್ಬ ಪ್ರಸಾಧನ ತಜ್ಞರ ಮುಖ್ಯ ಗುರಿ ತನ್ನ ಕೆಲಸಗಳು ಸುಂದರವಾಗಿರಬೇಕು ಮತ್ತು ಇತರರನ್ನೂ ಸುಂದರವಾಗಿಸಬೇಕು ಎನ್ನೋದು ಆತನ ತಲೆಯೊಳಗೆ ನುಸುಳಿಕೊಂಡಿರುತ್ತದೆ.
ವೃತ್ತಿಯೇ ಭಿನ್ನತೆ ಮಡಿಲು:
ದಿನನಿತ್ಯದ ಹೇರ್ಕಟ್, ಕೂದಲು ತೊಳೆಯುವುದು ಇತ್ಯಾದಿಗಳಿಂದ ಆರಂಭವಾಗಿ ಸ್ಟೈಲಿಂಗ್, ಪರ್ಮಿಂಗ್, ಕಲರಿಂಗ್, ಪೆಡಿಕ್ಯೂರ್ ಮತ್ತು ಫೇಶಿಯಲ್ ಮುಂತಾದ ಕೆಲಸಗಳಿರುತ್ತವೆ. ಸ್ಪಾ ಮತ್ತು ಹಬೆ ಸ್ನಾನ ಚಿಕಿತ್ಸೆಗಳೂ ಇದರಲ್ಲಿರುತ್ತವೆ. ಇವೆಲ್ಲಾ ಕೆಲಸಗಳಲ್ಲಿ ಬಳಸಲ್ಪಡುವ ಉಪಕರಣಗಳ ಬಗ್ಗೆ ಮತ್ತು ಸೌಂದರ್ಯ ಉತ್ಪನ್ನಗಳ ಕುರಿತು ನಿಮಗೆ ಅಗಾಧ ಜ್ಞಾನವಿರಬೇಕಾದ್ದು ಅತ್ಯಗತ್ಯ. ವ್ಯಾಕ್ಯೂಮ್, ಬಾಡಿ ಗಾಲ್ವನಿಕ್ ಯಂತ್ರ, ವಿದ್ಯುತ್ನ ತೀವ್ರತೆ, ವಿವಿಧ ರೀತಿಯ ತೈಲಗಳು ಮತ್ತು ಕ್ರೀಮ್ಗಳ ಬಗ್ಗೆ ತಿಳುವಳಿಕೆ ಇರಬೇಕು. ಅದೇ ರೀತಿ ಗ್ರಾಹಕರ ಕೂದಲು ಮತ್ತು ಚರ್ಮದ ವಿಧಗಳನ್ನು ತಿಳಿದುಕೊಂಡು ಅದಕ್ಕೆ ಸೂಕ್ತವಾಗುವ ಸೌಂದರ್ಯ ಚಿಕಿತ್ಸೆಯನ್ನು ನೀಡಲು ಗೊತ್ತಿರಬೇಕು. ಇದು ಈ ವೃತ್ತಿಯಲ್ಲಿರುವ ಪ್ರಮುಖವಾದ ಅಗತ್ಯತೆಗಳು.
ಈ ವೃತ್ತಿಯ ಅಗತ್ಯತೆ ಏನು:
ಪ್ರಸಾಧನ ಉದ್ಯಮದ ಉದ್ಯೋಗಗಳಿಗೆ ಯಾವುದೇ ಸಾಂಪ್ರದಾಯಿಕ ಪದವಿಗಳ ಅಗತ್ಯವಿಲ್ಲ. ನೀವು ವಿವಿಧ ಸೌಂದರ್ಯ ಥೆರಪಿ, ಮೇಕಪ್, ಅರೋಮಾ ಥೆರಪಿ, ಎಲೆಕ್ಟ್ರಾಲೈಸಿಸ್, ಟ್ರಿಕಾಲಜಿ ಮತ್ತು ಹರ್ಬಲ್ ಥೆರಪಿ ಇತ್ಯಾದಿಗಳಲ್ಲಿ ತರಬೇತಿ ಪಡೆದಿದ್ದರೆ ಸಾಕು. ಕೆಲವು ವಿಶ್ವವಿದ್ಯಾಲಯಗಳು ಮತ್ತು ವೈಎಂಸಿಎಯಂತಹ ಪಾಲಿಟೆಕ್ನಿಕ್ಗಳು, ದೆಹಲಿಯಲ್ಲಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ವೃತ್ತಿಪರ ತರಬೇತಿ ಸಂಸ್ಥೆಗಳು, ಹಬೀಬ್ಸ್ ಹೇರ್ ಅಕಾಡೆಮಿ ಮತ್ತು ಸೌಂದರ್ಯ, ಆರೋಗ್ಯ ಹಾಗೂ ಆಡಳಿತ ಕುರಿತಾದ ವಿಎಲ್ಸಿಸಿ ಸಂಸ್ಥೆಯು ಪ್ರಸಾಧನ ಉದ್ಯೋಗಗಳ ಬಗ್ಗೆ ತರಬೇತಿಗಳನ್ನು ನೀಡುತ್ತವೆ.
ಉದ್ಯೋಗ ಅವಕಾಶಗಳು
ಪ್ರಸಾಧನ ಕ್ಷೇತ್ರದ ಕುರಿತು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅತ್ಯಾಧುನಿಕ ಸಲೂನ್ಗಳಲ್ಲಿ, ಐಷಾರಾಮಿ ಬ್ಯೂಟಿ ಪಾರ್ಲರ್ಗಳಲ್ಲಿ ಮತ್ತು ಪಂಚತಾರಾ ರೆಸಾರ್ಟ್ಗಳಲ್ಲಿ ಉದ್ಯೋಗ ಮಾಡುವ ವಿಫುಲ ಅವಕಾಶಗಳಿವೆ. ಮೇಕಪ್ ಕಲಾವಿದರು ಟಿವಿ, ಸಿನಿಮಾ ಮತ್ತು ಜಾಹೀರಾತು ಮುಂತಾದ ಮಾಧ್ಯಮ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಇದಲ್ಲದೆ ನೀವು ಫ್ಯಾಷನ್ ಸಲಹೆಗಾರರಾಗಿ, ಫ್ಯಾಷನ್ ಲೇಖಕರಾಗಿ ಮತ್ತು ಮಾರಾಟ ಸಲಹೆಗಾರರಾಗಿಯೂ ವೃತ್ತಿಯನ್ನು ಕೈಗೊಳ್ಳಬಹುದು. ಭವಿಷ್ಯದಲ್ಲಿ ನೀವು ನಿಮ್ಮದೇ ಸ್ವಂತ ಉದ್ಯೋಗವನ್ನೂ ಕೂಡ ಆರಂಭಿಸಬಹುದು.