ಕ್ರೀಡಾ ಸುದ್ದಿ

ಟಿ-20 ಮ್ಯಾಚ್ ಗೆದ್ದ ವನಿತೆಯರು: ಭಾರತ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ವಿಜಯ

ಮೊದಲ ಪಂದ್ಯದಲ್ಲಿ ಅಭೂತಪೂರ್ವ ಗೆಲುವು ಪಡೆದಿದ್ದ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ, ಎರಡನೇ ಪಂದ್ಯದಲ್ಲೂ ಅದೇ ವಿಶ್ವಾಸದಿಂದ ಆಟ ಆಡಿ ಗೆಲುವು ಪಡೆದುಕೊಂಡಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು, ಜೂಲನ್ ಗೋಸ್ವಾಮಿ ಮತ್ತು ಕನ್ನಡತಿ ರಾಜೇಶ್ವರಿ ಗಾಯಕ್‌‌ವಾಡ್ ಅವರ ನಿಖರ ಬೌಲಿಂಗ್‌‌‌ನಿಂದ ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿತು.

ಮಳೆಯಿಂದ ಆಟ ತಡವಾಗಿ ಆರಂಭವಾದ ಕಾರಣ ಪಂದ್ಯವನ್ನು 18 ಓವರ್‌‌ಗಳಿಗೆ ಇಳಿಸಲಾಯಿತು. ಆಸ್ಟ್ರೇಲಿಯಾ ಅಂತಿಮವಾಗಿ 18 ಓವರ್‌‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು.

126 ರನ್ ಗುರಿ ಬೆನ್ನತ್ತಿದ ಭಾರತವು ಉತ್ತಮ ಆರಂಭವನ್ನು ಪಡೆಯಿತು. ಈ ಹಂತದಲ್ಲಿ ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು 10 ಓವರರ್‌‌‌ಗಳಿಗೆ ಇಳಿಕೆ ಮಾಡಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ ಗೆಲ್ಲಲು 66 ರನ್ ಗುರಿ ನಿಗದಿ ಪಡಿಸಲಾಯಿತು.

ಸುಲಭದ ಗುರಿಯನ್ನು ಬೆನ್ನತ್ತಿದ ಮಿಥಾಲಿ ರಾಜ್ (37) ಮತ್ತು ಸ್ಮೃತಿ ಮಂದನ (22) ರನ್ ಗಳಿಸಿ ಜಯ ತಂದಿತ್ತರು. ಅಂತಿಮವಾಗಿ ಭಾರತ 9.1 ಓವರ್‌‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿ ಜಯ ಪಡೆಯಿತು.