ಕ್ರೀಡಾ ಸುದ್ದಿ

ಸ್ಕ್ವಾಷ್ ಆಟಕ್ಕಾಗಿ ಫೇಸ್‌‌ಬುಕ್‌‌‌‌ನಲ್ಲಿ ಕಿಡ್ನಿ ಮಾರಾಟಕ್ಕಿಟ್ಟ ಕ್ರೀಡಾಪಟು!

ದೇಶಕ್ಕಾಗಿ ಚಿನ್ನದ ಪದಕ ಗೆದ್ದ ಸ್ಕ್ವಾಷ್ ಆಟಗಾರನೊಬ್ಬ ದಕ್ಷಿಣ ಏಷ್ಯಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಣವಿಲ್ಲದೆ, ತನ್ನ ಕಿಡ್ನಿಯನ್ನೇ ಮಾರಾಟ ಮಾಡಲು ಮುಂದಾಗಿರುವ ಘಟನೆ ಈ ವಾದಕ್ಕೆ ಸಾಕ್ಷಿ ಒದಗಿಸಿದೆ.

ಉತ್ತರ ಪ್ರದೇಶದ ಧಾಮ್‌‌ಪುರ್‌ನ 23 ವರ್ಷದ ರವಿ ದೀಕ್ಷಿತ್ ಕಳೆದ 10 ವರ್ಷದಿಂದ ಸ್ಕ್ವಾಷ್ ಆಡುತ್ತಿದ್ದು, 2010ರಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌‌ಶಿಪ್‌‌ನಲ್ಲಿ ದೇಶಕ್ಕಾಗಿ ಮೊದಲ ಚಿನ್ನದ ಪದಕ ಗೆದ್ದಿದ್ದರು. ಆದರೆ ಸರ್ಕಾರದಿಂದ ಸೂಕ್ತ ನೆರವು ಸಿಗದ ಕಾರಣ ಸ್ಕ್ವಾಷ್ ತರಬೇತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ರವಿ, ಇದೀಗ 8 ಲಕ್ಷ ರೂಪಾಯಿಗೆ ತಮ್ಮ ಕಿಡ್ನಿ ಮಾರಲು ಸಿದ್ಧವಾಗಿದ್ದಾರೆ.

ಮುಂಬರುವ ಫೆಬ್ರವರಿಯಲ್ಲಿ ಗುವಾಹಟಿಯಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಗೇಮ್ಸ್‌‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ನಾಲ್ಕು ಜನ ಸ್ಕ್ವಾಷ್ ಕ್ರೀಡಾಪಟುಗಳ ತಂಡದಲ್ಲಿ ರವಿ ಕೂಡ ಸ್ಥಾನ ಪಡೆದಿದ್ದಾರೆ. ಆದರೆ ತರಬೇತಿಗಾಗಿ ಆರ್ಥಿಕ ನೆರವು ಸಿಗದ ಕಾರಣ, ರವಿ ತಮ್ಮ ಕಿಡ್ನಿಯನ್ನು 8 ಲಕ್ಷ ರೂಪಾಯಿಗೆ ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ತಮ್ಮ ಕಿಡ್ನಿ ಮಾರಲು ಸಿದ್ಧವಿರುವುದಾಗಿ ಫೇಸ್‌‌ಬುಕ್ ಹಾಗೂ ಟ್ವಿಟರ್‌‌ನಲ್ಲಿ ಬರೆದುಕೊಂಡಿದ್ದಾರೆ.

ರವಿ ತಂದೆ ಕೆಲಸ ಮಾಡುವ ಧಾಮ್‌‌‌ಪುರ್ ಸಕ್ಕರೆ ಕಾರ್ಖಾನೆಯವರು ರವಿಗೆ ಧನ ಸಹಾಯ ನೀಡುತ್ತಿದ್ದರು. ಇದೀಗ ದಕ್ಷಿಣ ಏಷ್ಯಾ ಗೇಮ್ಸ್‌‌‌‌ನಲ್ಲಿ ಪಾಲ್ಗೊಳ್ಳಲು 1 ಲಕ್ಷ ರೂಪಾಯಿ ನೆರವಿನ ಅವಶ್ಯಕತೆ ಇದ್ದು,ಈ ಹಣ ಹೊಂದಿಸಲು ರವಿ ತಮ್ಮ ಕಿಡ್ನಿ ಮಾರಲು ಮುಂದಾಗಿದ್ದಾರೆ ಎನ್ನಲಾಗಿದೆ.

ಏಷ್ಯನ್ ಜೂನಿಯರ್ ಚಾಂಪಿಯನ್‌‌‌ಷಿಪ್‌‌‌ನಲ್ಲಿ ಚಿನ್ನದ ಪದಕ ಸೇರಿದಂತೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ  ರವಿ ಹಲವು ಪದಕಗಳನ್ನು ಗೆದ್ದು, ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.