ಸ್ಟಾರ್ಟ್ಅಪ್ ಕಂಪೆನಿಗಳೆಂದರೆ ಇನ್ನಷ್ಟೇ ಪ್ರವರ್ಧಮಾನಕ್ಕೆ ಬರಬೇಕಾದ ಕಂಪೆನಿಗಳು. ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳಬೇಕಾದರೆ ಮತ್ತು ನಿಮ್ಮ ಪ್ರತಿಭೆ ಹೊರಬರಬೇಕಿದ್ದರೆ ಇಂಥ ಕಂಪೆನಿಗೆ ಸೇರುವುದು ಉತ್ತಮ ನಿರ್ಧಾರವಾಗಿದೆ. ಆದರೆ ನೀವು ಈಗಿರುವ ಕಂಪೆನಿಗಳಲ್ಲಿ ಸಿಗುತ್ತಿದ್ದ ಸೌಲಭ್ಯಗಳು ಹೊಸ ಕಂಪೆನಿಯಲ್ಲಿ ಸಿಗುವುದಿಲ್ಲ. ಅಲ್ಲಿ ಜವಾಬ್ದಾರಿ ಹೊರುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಹೊಸ ದಾರಿಯನ್ನು ಕಂಡುಕೊಳ್ಳುವಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಈ ದಾರಿಯು ಗುರಿ ರಹಿತವಾಗಿರುತ್ತದೆ. ಇಲ್ಲಿ ಎಲ್ಲವನ್ನೂ ಪ್ರಯೋಗ ರೂಪದಲ್ಲಿ ಮಾಡಬೇಕಾಗುತ್ತದೆ. ಇದು ಯಶಸ್ವಿಯಾದರೆ ಮಾತ್ರ ಆತ್ಮವಿಶ್ವಾಸದಿಂದ ಮುನ್ನುಗ್ಗಲು ಸಾಧ್ಯವಾಗುತ್ತದೆ. ಇದರಲ್ಲಿ ಸೋಲೂ ಇರುತ್ತದೆ ಹಾಗೂ ಯಶಸ್ಸು ಕೂಡಾ ಇರುತ್ತದೆ.
ನಿರ್ಣಾಯಕ ಹುದ್ದೆಯಲ್ಲಿರುವ ನಿಮ್ಮಂಥ ವ್ಯಕ್ತಿಗಳು ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿ ಕೆಲಸದ ಸಮಯಗಳಿಗೆ ಯಾವುದೇ ಮಿತಿಯಿರುವುದಿಲ್ಲ. ಸ್ವಯಂ ಶಿಸ್ತಿಲ್ಲದೆ ಕೆಲಸ ಮಾಡುವುದು ತುಂಬಾ ಕಷ್ಟ. ಅಲ್ಲದೆ ಸ್ಟಾರ್ಟ್ಅಪ್ ಕಂಪೆನಿಗಳಿಗೆ ಯಾವುದೇ ಬ್ರಾಂಡ್ ಇಮೇಜ್ ಇರುವುದಿಲ್ಲ. ಕೆಲಸ ಮಾಡುವಾಗ ನಿಮಗೆ ಒಂದು ದಿನದ ಬಿಡುವೂ ಇರುವುದಿಲ್ಲ. ನಿಮ್ಮ ಗುರಿಯನ್ನು ತಲುಪಲು ನೀವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಜೊತೆಗೆ ನೀವು ಕ್ರಿಯೇಟಿವ್ ಕೂಡಾ ಆಗಿರಬೇಕು. ಹಾಗಂತ ಸ್ಟಾರ್ಟ್ಅಪ್ ಕಂಪೆನಿಗಳಲ್ಲಿ ಎಲ್ಲಾ ಸಂದರ್ಭಗಳೂ ಪ್ರತಿಕೂಲವಾಗಿಯೇ ಇರುತ್ತದೆ ಎಂದು ಅಂದುಕೊಳ್ಳಬೇಡಿ.
ಹೊಸ ಕಂಪೆನಿಯಲ್ಲಿ ನೀವು ಹೊಸ ರೀತಿಯಲ್ಲಿ ಯೋಚನೆ ಮಾಡಬೇಕಾಗುತ್ತದೆ. ನೀವು ಹೆಚ್ಚು ಚುರುಕು ಮತ್ತು ಕ್ರಿಯಾಶೀಲರಾಗಿರಬೇಕಾಗುತ್ತದೆ. ಅಲ್ಲಿಂದ ನೀವು ಹೊರಗೆ ಬಂದರೂ ಈ ಹಿಂದಿಗಿಂತಲೂ ಹೆಚ್ಚಿನ ಕೌಶಲ್ಯಗಳನ್ನು ಪಡೆದು ಬಂದಿರುತ್ತೀರಿ. ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪರ್ಕವನ್ನು ಪಡೆದುಕೊಳ್ಳುತ್ತೀರಿ. ಆದ್ದರಿಂದ ನಿಮ್ಮ ಅನುಕೂಲಕ್ಕೆ ತಕ್ಕಂತಹ ನಿರ್ಧಾರವನ್ನು ಕೈಗೊಳ್ಳಿ.