ಅಡುಗೆ ಮನೆ

ರುಚಿಯೇರಿಸುವ ನೀರುಳ್ಳಿ ಚಟ್ನಿ

ಒಂದು ಫುಲ್ ತಟ್ಟೆ ಗಂಜಿ ಜತೆಗೆ ಒಂದು ಪುಟ್ಟ ಕಪ್‌ನಲ್ಲಿ ಚಟ್ನಿ ಐಟಂ ಸಾಕು ಮಾರಾಯ್ರೆ ಹೊಟ್ಟೆ ತುಂಬಾ ಊಟ ಮಾಡಿಬಿಡಬಹುದು ಎನ್ನುವ ಮಾತು ಕರಾವಳಿಯ ಜನ ಸಾಧಾರಣವಾಗಿ ಊಟದ ಕುರಿತು ಹೇಳುವ ಮೊದಲ ಮಾತು. ಕರಾವಳಿಯ ಶ್ರೀಸಾಮಾನ್ಯ ಇಂತಹ ಗಂಜಿ ಊಟಕ್ಕೆ ಮೊರೆ ಹೋಗುತ್ತಾನೆ. ಕರಾವಳಿಯ ಸ್ಟಾರ್ ಹೋಟೆಲ್‌ಗಳನ್ನು ಬಿಟ್ಟು ಬೀದಿ ಬದಿಯ ಹೋಟೆಲ್‌ಗಳಲ್ಲಿ ಗಂಜಿ ಚಟ್ನಿಗೆ ಸಾಕಷ್ಟು ಬೇಡಿಕೆ ಇದೆ. ಅವರ ಮೆನು ಕಾರ್ಡ್‌ನಲ್ಲಿ ಗಂಜಿ ಚಟ್ನಿಗಂತೂ ಸ್ಥಾನ ಇದ್ದೇ ಇದೆ. ಕಡಿಮೆ ಖರ್ಚಿನಲ್ಲಿ ಹೊಟ್ಟೆ ಬೀರಿಯುಷ್ಟು ಊಟಮಾಡಿಕೊಂಡು ಹೋಗಬಹುದು.
ಅರೇ ಕರಾವಳಿ ಯಾಕೆ ಮಾರಾಯ್ರೆ ದೇಶದ ಉದ್ದ ಅಗಲಕ್ಕೂ ಒಂದ್ ಸಲ ಹೋಗಿ ಊಟಕ್ಕೆ ಕೂತರೂ ಅವರು ಕೂಡ ಇದೇ ಮಾತನ್ನು ಹೇಳಿಬಿಡುತ್ತಾರೆ. ಗಂಜಿ ಹಾಗೂ ಚಟ್ನಿಗೆ ಬಹಳ ಹತ್ತಿರದ ಸಂಬಂಧವಿದೆ. ಅದರಲ್ಲೂ ನೀರುಳ್ಳಿ ಚಟ್ನಿಯಂತೂ ಸಖತ್ ಟೇಸ್ಟ್. ಒಂದ್ ಸಲ ಯಾವುದೇ ಪಲ್ಯ, ಪದಾರ್ಥ ಇಲ್ಲ ಅಂದರೂ ಕೂಡ ಚಟ್ನಿಯಲ್ಲಿ ಊಟ ಮುಗಿಸಿಬಿಡಬಹುದು ಎನ್ನುವ ಗ್ಯಾರಂಟಿ ನೀವು ಸಿದ್ಧ ಪಡಿಸುವ ಚಟ್ನಿ ನೀಡುತ್ತದೆ.
ಅಂದಹಾಗೆ ಚಟ್ನಿಯು ಬಹುತೇಕ ಎಲ್ಲಾ ಬಗೆಯ ತಿಂಡಿ ತಿನಿಸುಗಳ ಜತೆಯಲ್ಲಿ ಸೇವಿಸಬಹುದಾದ ಖಾದ್ಯ. ಭಾರತೀಯ ಚಟ್ನಿ ಸಿಹಿ, ಹುಳಿ ಮತ್ತು ಮಸಾಲೆಗಳಿಂದ ಕೂಡಿದ್ದು, ತನ್ನ ವಿಭಿನ್ನ ಶೈಲಿಯ ರುಚಿಗಳ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಟ್ನಿಯನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು. ಒಂದು ವೇಳೆ ನಿಮ್ಮ ಮನೆಗೆ ಇದ್ದಕ್ಕಿದ್ದಂತೆ ನಿಮ್ಮ ಸಂಬಂಧಿಕರು ಅಥವಾ ನೆಂಟರು ಆಗಮಿಸಿದರೆ, ಆಗ ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನೆಲ್ಲ ಸೇರಿಸಿ, ಒಂದಿಷ್ಟು ಚಟ್ನಿಯನ್ನು ನೀವು ರುಬ್ಬಿಕೊಳ್ಳಬಹುದು. ಅದನ್ನು ಊಟದಲ್ಲಿ ಸಹ ಬಡಿಸಬಹುದು. ನೀರುಳ್ಳಿ ಚಟ್ನಿಯನ್ನು ದೋಸೆ, ಪರೋಟಅಥವಾ ಬಜ್ಜಿಗೆ ಹಾಕಿಕೊಂಡು ತಿನ್ನಬಹುದು. ಕೊಂಚ ಖಾರದ ಜತೆಗೆ ಹುಳಿಯಿಂದ ನೀರುಳ್ಳಿ ಚಟ್ನಿಯಂತೂ ನಿಮ್ಮ ನಾಲಿಗೆಯ ರುಚಿಯನ್ನು ತಣಿಸಿಬಿಡುತ್ತದೆ.
ನೀರುಳ್ಳಿ ಚಟ್ನಿಗೆ ಏನೆಲ್ಲ ಸಾಮಗ್ರಿ ಬೇಕು:
ನೀರುಳ್ಳಿಗಳು – ೩ (ಕತ್ತರಿಸಿದಂತಹುದು),ಕೆಂಪು ಒಣ ಮೆಣಸಿನಕಾಯಿಗಳು- ೭-೮, ಹುರಿದ ಕಡಲೆ ಹಿಟ್ಟು – ೧ ಟೀ.ಚಮಚ, ಹುಣಸೆ ತಿರುಳು – ೧ ಟೀ.ಚಮಚ, ಉಪ್ಪು ರುಚಿಗೆ ತಕ್ಕಷ್ಟು , ಬೆಲ್ಲ – ೧ ಟೀ. ಚಮಚ , ಎಣ್ಣೆ – ೧ ಟೀ. ಚಮಚ
ಮಾಡುವ ಸುಲಭ ವಿಧಾನ:
ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಮೆಣಸಿನ ಕಾಯಿಗಳನ್ನು ಸ್ವಲ್ಪ ಸಮಯ ಉರಿಯಿರಿ. ನಂತರ ಅದಕ್ಕೆ ಈರುಳ್ಳಿ ಚೂರುಗಳನ್ನು ಹಾಕಿ, ಹೊಂಬಣ್ಣಕ್ಕೆ ಬರುವವರೆಗೆ ಉರಿಯಿರಿ. ಇದಕ್ಕೆ ಹುರಿದ ಕಡಲೆ ಹಿಟ್ಟು, ಉಪ್ಪು, ಹುಣಸೆ ತಿರುಳು ಮತ್ತು ಬೆಲ್ಲವನ್ನು ಹಾಕಿ. ೪-೫ ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಹುರಿಯಿರಿ. ಬೆಲ್ಲವು ಸಂಪೂರ್ಣವಾಗಿ ಕರಗಬೇಕು ಎಂಬುದನ್ನು ಗಮನದಲ್ಲಿಡಿ. ಈಗ ಹುರಿಯನ್ನು ಆರಿಸಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ.

 

ಈಗ ಮಿಶ್ರಣವನ್ನು ದಪ್ಪನಾದ ಪೇಸ್ಟ್‌ನಂತೆ ಕಲೆಸಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿ. ನಂತರ ಖಾರವಾದ ಚಟ್ನಿಯನ್ನು ದೋಸೆ ಅಥವಾ ಇಡ್ಲಿಗಳ ಜತೆಯಲ್ಲಿ ಬಡಿಸಿಕೊಳ್ಳಿ. ನಿಮಗೆ ಹುಳಿ, ಖಾರ ಎರಡು ಕೂಡ ಒಂದೇ ರೀತಿಯಲ್ಲಿ ಇರಬೇಕು ಅಂದಾದರೆ ಹುಣಸೆ ತಿರುಳು ಅಥವಾ ನಿಂಬೆ ರಸ, ಟೊಮೆಟೋ ಪೇಸ್ಟ್‌ನನ್ನು ಕೂಡ ಬಳಸಬಹುದು. ನೀರುಳ್ಳಿಯಲ್ಲಿರುವ ಕ್ರೋಮಿಯಂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹೊಟ್ಟೆಗೂ ಒಳ್ಳದು ಆರೋಗ್ಯಕ್ಕೂ ಒಳ್ಳೆಯದು ಮಾರಾಯ್ರೆ.