ಸಿನಿಮಾ ಸುದ್ದಿ

ಪದ್ಮಕ್ಕ ಸೀಲು ಹೊಡೆದ ರೋಲು !

ನನ್ ಮಟ್ಟಿಗೆ ಇದೊಂದು ಭಿನ್ನ ರೀತಿಯ ಪಾತ್ರ. ಹೊಸ ಡೈರೆಕ್ಟರು, ಹೊಸ ಕ್ಯಾರೆಕ್ಟರು ಜತೆಗೆ ಹೊಸಬರ ಟೀಮ್ ಅಂತಾ ಸಿನ್ಮಾ ಒಪ್ಪಿಕೊಂಡು ಮಾಡ್ತಾ ಇದ್ದೇನೆ ಎಂದು ಬಿಟ್ಟ್ರು ಪದ್ಮ ಅಲಿಯಾಸ್ ಕನ್ನಡದ ಪೋಷಕ ನಟಿ ಪದ್ಮಜಾ ರಾವ್.
ಕರಾವಳಿಯ ಅಸುಪಾಸಿನಲ್ಲಿ ಎನ್‌ಎಚ್ 36 ಸಿನ್ಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮುಖ್ಯವಾಗಿ ನೈಜ ಕತೆಯನ್ನು ಇಟ್ಟುಕೊಂಡು ಸಿನ್ಮಾ ಮಾಡಲಾಗುತ್ತಿದೆ ಎನ್ನುವ ಮಾತಿನೊಂದಿಗೆ ಸಿನ್ಮಾದ ತಾರಾಗಣ ಸಂಪೂರ್ಣವಾಗಿ ಚಿತ್ರಕ್ಕೆ ಆಳಕ್ಕೆ ಇಳಿದು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಎಲ್ಲರೂ ಹೊಸಬರು. ಚಿತ್ರದಲ್ಲಿ ಕೊಂಚ ಪಳಗಿದವರೆಂದರೆ ಪದ್ಮಜಾ ರಾವ್ ಮಾತ್ರ. ಈ ಕಾರಣದಿಂದ ಪದ್ಮಜಾ ರಾವ್ ಜತೆಗೆ ಚಿಟ್‌ಚಾಟ್ ಮಾಡಿದಾಗ ಅವರು ಹೇಳಿದ ಮಾತು ಹೀಗಿತ್ತು. ಕರಾವಳಿ ನನಗೆ ಸಾಣೇ ಇಷ್ಟ ಕಣ್ರಿ. ಕನ್ನಡದಲ್ಲಿ ಸರಿಸುಮಾರು 90ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದೆ. ಒಂದೇ ರೀತಿಯ ಪಾತ್ರಗಳು ನನಗೆ ತುಂಬಾ ಬೋರ್. ಪ್ರೇಕ್ಷಕರು ಕೂಡ ನಮ್ಮನ್ನು ಒಂದೇ ರೀತಿಯಲ್ಲಿ ನೋಡಲು ಬಯಸುವುದಿಲ್ಲ. ಈ ಕಾರಣದಿಂದ ಭಿನ್ನ ಪಾತ್ರಕ್ಕಾಗಿ ಅಲೆದಾಡುವಾಗ ಈ ಚಿತ್ರ ಕೈಗೆ ಬಂದು ಒಪ್ಪಿಕೊಂಡು ಈಗ ನನ್ನ ಪಾತ್ರ ಮುಗಿಸಿ ಬಿಟ್ಟೆ ಎಂದು ನಗುಮೊಗದಿಂದ ಪದ್ಮಜಾ ರಾವ್ ಹೇಳಿಬಿಟ್ಟರು.
ತುಳು ಭಾಷೆಯಲ್ಲಿ ಬಂದ ಚಾಲಿಪೋಲಿಲು ಸಿನ್ಮಾ ನನಗೊಂದು ಭಿನ್ನ ಪಾತ್ರ ನೀಡಿತ್ತು. ಈ ಪಾತ್ರ ನನ್ನ ಇಮೇಜ್‌ಗಿಂತ ಭಿನ್ನವಾಗಿತ್ತು. ಕರಾವಳಿಗೆ ಬಂದಾಗ ಚಾಲಿಪೋಲಿಲು ಸಿನ್ಮಾದ ನಟಿ ಎಂದೇ ಪರಿಗಣಿಸುತ್ತಾರೆ. ಈ ಚಿತ್ರದ ಬಳಿಕ ಮತ್ತೆರಡು ಸಿನ್ಮಾಕ್ಕೆ ಆಫರ್ ಬಂತು. ನನ್ನ ಡೇಟ್ ಸಮಸ್ಯೆಯಿಂದ ಕೈ ಬಿಟ್ಟೆ. ಮತ್ತೆ ತುಳುವಿನಲ್ಲಿ ಸಿನ್ಮಾ ಮಾಡಬೇಕು ಅಂದುಕೊಂಡಿದ್ದೇನೆ.