ಸಿಹಿ ತಿಂಡಿಗಳೆಂದರೆ ಎಲ್ಲರಿಗೂ ಪಂಚಪ್ರಾಣ. ಅದರಲ್ಲೂ ಗುಲಾಬ್ ಜಾಬೂನ್, ರಸಗುಲ್ಲಾ ಎಂದರೆ ನಾಲಿಗೆ ಚಪ್ಪರಿಸಿಕೊಂಡು ತಿನ್ನುವುದು ಎಲ್ಲರಿಗೂ ಗೊತ್ತು. ಆದರೆ ಉತ್ತರ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಗುಜರಾತ್ ಕಡೆ ಹೋದರಂತೂ ಸಿಹಿ ತಿಂಡಿಗೆ ಸಾಕಷ್ಟು ಮರ್ಯಾದೆ ಇದೆ. ಅವರ ಊಟೋಪಚಾರದಲ್ಲಿ ಸಿಹಿತಿಂಡಿಗೂ ಸಾಕಷ್ಟು ಮಹತ್ವ ನೀಡುತ್ತಾರೆ.
ಅವರ ಬಹುಮುಖ್ಯವಾದ ಸಿಹಿತಿಂಡಿಗಳಲ್ಲಿ ರಬ್ಡೀ ಕೂಡ ಒಂದು ಎನ್ನೋದು ಬಹಳಷ್ಟು ಮಂದಿಗೆ ಗೊತ್ತಿದೆ. ಅಂದಹಾಗೆ ರಬ್ಡೀ ಬರೀ ಗುಜರಾತ್ನಲ್ಲಿ ಮಾತ್ರ ಫೇಮಸ್ ಅಲ್ಲ. ಉತ್ತರ ಭಾರತದ ಎಲ್ಲ ಸ್ಥಳಗಳಲ್ಲೂ ಜನಪ್ರಿಯತೆಯನ್ನು ಮೈಗೂಡಿಸಿಕೊಂಡಿದೆ. ಇಂತಹ ಸ್ವಾದಿಷ್ಟವಾದ ಈ ತಿನಿಸನ್ನು ಒಂದು ಸಲ ಬಾಯಿಗಿಟ್ಟರೆ ಸಾಕು ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಉಂಟಾಗೋದಂತೂ ಗ್ಯಾರಂಟಿ.
ಬೇಕಾಗುವ ಸಾಮಾಗ್ರಿಗಳು : ಮಾವಿನಹಣ್ಣಿನ ಪಲ್ಪ್ ೨ ಚಮಚ, ಸ್ಟ್ರಾಬೆರಿ ಪಲ್ಪ್ ೨ ಚಮಚ,
ಏಲಕ್ಕಿ ಪುಡಿ ೧ ಚಮಚ, ಹಾಲು ೧ ಲೀ, ಸಕ್ಕರೆ ೧/೨ ಕಪ್
ತಯಾರಿಸುವ ವಿಧಾನ ಬಹಳ ಸುಲಭ: ಒಂದು ಪ್ಯಾನ್ಗೆ ಫ್ಯಾಟ್ ಇರುವ ಹಾಲು ಹಾಕಿ ಬಿಸಿ ಮಾಡಿ. ಹಾಲಿನಲ್ಲಿ ಕ್ರೀಂ ಸರಿಯಾಗಿ ಬರುವವರೆಗೆ ಕುದಿಬರಿಸಿ. ನಂತರ ಅದಕ್ಕೆ ಸಕ್ಕರೆ ಹಾಕಿ.
ಸಕ್ಕರೆ ಸರಿಯಾಗಿ ಕರಗುವಂತೆ ನೋಡಿಕೊಳ್ಳಿ ಕರಗಿದ ಮೇಲೆ ಅದಕ್ಕೆ ಏಲಕ್ಕಿ ಹಾಕಿ.
ಅದು ಘಂ ಎಂದು ಪರಿಮಳ ಬಂದ ಮೇಲೆ ಕೆಳಗಿಳಿಸಿ ತಣಿಯಲು ಬಿಡಿ.
ತಣ್ಣಗಾದ ಮೇಲೆ ಮೂರು ಬೇರೆ ಬೇರೆ ಬೌಲ್ಗಳಲ್ಲಿ ಅದನ್ನು ಹಾಕಿ. ನಂತರ ಮೊದಲನೇ ಬೌಲನ್ನು ಹಾಗೇ ಬಿಡಿ. ಎರಡನೇ ಬೌಲ್ಗೆ ಸ್ಟ್ರಾಬೆರಿ ಪಲ್ಪ್ ಬೆರೆಸಿ ಹಾಗೂ ಮೂರನೇ ಬೌಲ್ಗೆ ಮ್ಯಾಂಗೊ ಪಲ್ಪ್ ಬೆರೆಸಿ. ನಂತರ ಇನ್ನೊಂದು ದೊಡ್ಡ ಬೌಲ್ ತೆಗೆದುಕೊಂಡು ಅದಕ್ಕೆ ಮೊದಲಿಗೆ ಮಾವಿನ ಹಣ್ಣಿನ ಮಿಶ್ರಿತ ರಬ್ಡೀ ಹಾಕಿ, ನಂತರ ಸಾದಾ ರಬ್ಡೀ ಅದರ ಮೇಲೆ ಸ್ಟ್ರಾಬೆರಿ ರಬ್ಡೀ ಹಾಕಿ. ಈಗ ರುಚಿಯಾದ ರಬ್ಡೀ ಸವಿಯಲು ರೆಡಿಯಾಗುತ್ತದೆ.