ದೊಡ್ಡ ಸುದ್ದಿ

ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರೆಗ್ನೆಂಟ್‌ ಆಗೋ ಅವಕಾಶ!

ದ. ಕೋರಿಯಾ ಸರ್ಕಾರ ಇಲ್ಲಿನ ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್ ಆಫರ್ ನೀಡಿದ್ದು, ವಿದ್ಯಾರ್ಥಿನಿಯರು ಗರ್ಭವತಿ ಆದರೆ ತೊಂದರೆ ಇಲ್ಲ ಎಂಬ ಹೊಸ ಕಾನೂನು ಜಾರಿಗೊಳಿಸಿದೆ. ದ. ಕೋರಿಯಾದ ಶಿಕ್ಷಣ ಇಲಾಖೆ ಇಂತದ್ದೊಂದು ಸುತ್ತೋಲೆ ಹೊರಡಿಸಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿನಿಯರು ಗರ್ಭವತಿ ಆದ ಮೇಲೂ ತಮ್ಮ ಶಿಕ್ಷಣ ಮುಂದುವರೆಸಲು ಅವಕಾಶ ನೀಡಿದೆ.

ಹಾಗಂತ ಈ ಕಾನೂನು ಎಲ್ಲಾ ವಿದ್ಯಾರ್ಥಿನಿಯರಿಗೂ ಅನ್ವಯಿಸುತ್ತದೆ ಎಂದು ಭಾವಿಸಬೇಡಿ. ಈ ಹೊಸ ಕಾನೂನು ಕೇವಲ ಮದುವೆಯಾಗಿ ಗರ್ಭವತಿಯಾಗಿರುವ ವಿದ್ಯಾರ್ಥಿನಿಯರಿಗೆ ಮಾತ್ರ ಸಂಬಂಧಿಸಿದ್ದು. ದ.ಕೋರಿಯಾದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮದುವೆ ಹಾಗೂ ಗರ್ಭಧಾರಣೆಗೆ ಸಂಬಂಧಿಸಿದಂತೆ ಈ ಮೊದಲು ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಬೇರೆ ಬೇರೆ ಕಾನೂನುಗಳಿದ್ದು, ಆ ಎಲ್ಲಾ ಕಾನೂನನ್ನು ರದ್ದುಗೊಳಿಸಿ ಶಿಕ್ಷಣ ಇಲಾಖೆ ಹೊಸ ನೀತಿಯನ್ನು ಜಾರಿಗೊಳಿಸಿದೆ.

ಅದರಂತೆ ವಿದ್ಯಾರ್ಥಿ ದೆಸೆಯಲ್ಲೇ ಮದುವೆಯಾಗಿ ಗರ್ಭವತಿಯಾಗುವ ವಿದ್ಯಾರ್ಥಿನಿಯರು ಇನ್ಮುಂದೆ ತಮ್ಮ ಶಿಕ್ಷಣ ಮುಂದುವರೆಸುವ ಅವಕಾಶ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ಗರ್ಭವತಿ ವಿದ್ಯಾರ್ಥಿನಿಯರು ಹೆರಿಗೆ ಹಾಗೂ ಮಗುವಿನ ಆರೈಕೆಗಾಗಿ ಒಂದು ಸೆಮಿಸ್ಟರ್ ಅವಧಿಯ ರಜಾ ಕೂಡ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.

ದ.ಕೋರಿಯಾದಲ್ಲಿ ಈ ಹಿಂದೆ ಇದ್ದ ಕಾನೂನು ವಿದ್ಯಾರ್ಥಿ ದೆಸೆಯಲ್ಲೇ ಮದುವೆಯಾಗುವುದಕ್ಕೆ ಅನುಮತಿ ನೀಡುತ್ತಿರಲಿಲ್ಲ. ಇದೇ ಕಾರಣಕ್ಕೆ 1951ರಲ್ಲಿ ಅಂದಿನ ರಾಷ್ಟ್ರಾಧ್ಯಕ್ಷ ಕಿಮ್-ಯುಂಗ್-ಸಾಮ್, ಫಾರ್ಮಾ ವಿದ್ಯಾರ್ಥಿನಿಯಾಗಿದ್ದ ಸನ್-ಮ್ಯೂಂಗ್ ಸೂನ್‌‌ರನ್ನು ಕದ್ದು ಮುಚ್ಚಿ ಮದುವೆಯಾಗಿ, ನಂತರ ಆಕೆ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮದುವೆಯಾದ ಸುದ್ದಿಯನ್ನು ಬಹಿರಂಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.